ತಿರುಪತಿಯಲ್ಲಿ ಚಿರತೆ ಪ್ರತ್ಯಕ್ಷ, ತಿಮ್ಮಪ್ಪನ ಭಕ್ತರಿಗೆ ಬೆಚ್ಚಿಬೀಳಿಸುವ ಘಟನೆ ನಡೆದಿದೆ
ದೇಶದ ಅತಿ ಶ್ರೀಮಂತ ದೇಗುಲವಾದ ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದ 6 ವರ್ಷದ ಬಾಲಕಿಯೊಬ್ಬಳು ಚಿರತೆ ದಾಳಿಗೆ ಬಲಿಯಾಗಿದ್ದಾಳೆ. ತಿರುಮಲಕ್ಕೆ ತೆರಳುವ ಪಾದಚಾರಿ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಪಾದಚಾರಿ ಮಾರ್ಗದಲ್ಲಿ ಚಿರತೆ ದಾಳಿಗೆ ಬಲಿಯಾದ ಮೊದಲ ಘಟನೆ ಇದಾಗಿದೆ. ಈ ಘಟನೆಯು ಭಕ್ತರನ್ನು ಬೆಚ್ಚಿ ಬೀಳಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಪಾದಚಾರಿ ಮಾರ್ಗದ 7ನೇ ಮೈಲಿ ಬಳಿ ಇದೇ ರೀತಿ ಚಿರತೆಯೊಂದು ಪಾಲಕರ ಜತೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದ 5 ವರ್ಷದ ಬಾಲಕನ ಮೇಲೆ ದಾಳಿ ನಡೆಸಿತ್ತು. ಆದರೆ ಆತ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದ. ಆದರೆ ಮರುದಿನವೇ ಒಂದು ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಆದರೂ ಈಗ ಅದೇ ರೀತಿಯ ಘಟನೆ ಮರುಕಳಿಸಿದೆ.
ಹೀಗಾಗಿ ಬೆಟ್ಟದಲ್ಲಿ ಸಾಕಷ್ಟು ಚಿರತೆಗಳು ಇವೆ ಎಂಬುದು ಸಾಬೀತಾಗಿದ್ದು, ಇವುಗಳ ನಿಗ್ರಹವು ತಿರುಮಲ ತಿರುಪತಿ ದೇವಸ್ಥಾನ ಟಿಟಿಡಿ ಸಮಿತಿ ಹಾಗೂ ಆಂಧ್ರಪ್ರದೇಶ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೊವ್ವೂರು ಮಂಡಲದ ಪೋತಿರೆಡ್ಡಿಪಾಲೆಂ ಗ್ರಾಮದ ದಿನೇಶ ಕುಮಾರ್ ಮತ್ತು ಶಶಿಕಲಾ ಅವರು ಮಗಳು ಲಕ್ಷಿತಾ ಜತೆ ತಿರುಮಲ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಸಾಗುತ್ತಿದ್ದರು.
ಶುಕ್ರವಾರ ರಾತ್ರಿ 7.30ರಿಂದ 8 ಗಂಟೆಯ ಸುಮಾರಿಗೆ ಲಕ್ಷ್ಮೇ ನರಸಿಂಹ ಸ್ವಾಮಿ ದೇವಸ್ಥಾನದ ಬಳಿಯ ಬೆಟ್ಟದ ಮೇಲೆ ಕುಟುಂಬ ಸಮೇತರಾಗಿ ನಡೆದುಕೊಂಡು ಹೋಗುತ್ತಿದ್ದಾಗ ಬಂದ ಚಿರತೆ, ಅವರ ಮೇಲೆ ದಾಳಿ ಮಾಡಿ ಬಾಲಕಿಯನ್ನು ಸಮೀಪದ ಅರಣ್ಯಕ್ಕೆ ಎಳೆದೊಯ್ದಿದೆ. ಪಾಲಕರು ಮತ್ತು ಸಹ ಪಾದಚಾರಿಗಳು ರಕ್ಷಣೆಗೆ ಯತ್ನಿಸಿದರೂ ಕತ್ತಲಾಗಿದ್ದರಿಂದ ಸಾಧ್ಯವಾಗಲಿಲ್ಲ.
ಹೀಗಾಗಿ ಟಿಟಿಡಿ ಭದ್ರತಾಧಿಕಾರಿಗಳು, ಸ್ಥಳೀಯ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ, ಶನಿವಾರ ಮುಂಜಾನೆ ಅರಣ್ಯ ಪ್ರದೇಶದಲ್ಲಿ ಬಾಲಕಿಗಾಗಿ ಹುಡುಕಾಟ ನಡೆಸಿದಾಗ, ಅರಣ್ಯ ಪ್ರದೇಶವಾದ ಲಕ್ಷ್ಮೇ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ನಸುಕಿನ 4 ಗಂಟೆಗೆ ಶವ ಪತ್ತೆಯಾಗಿದೆ. ಬಾಲಕಿಯ ದೇಹವನ್ನು ಚಿರತೆ ಸಂಪೂರ್ಣವಾಗಿ ತುಂಡರಿಸಿದೆ. ಈ ಚಿರತೆ ದಾಳಿಯು ತಿರುಮಲಕ್ಕೆ ಪಾದಚಾರಿ ಮಾರ್ಗದಲ್ಲಿ ಪಾದಯಾತ್ರೆ ಮಾಡುವ ಭಕ್ತರಲ್ಲಿ ಭೀತಿ ಆವರಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.