ತುಂಬಾ ‍ದಪ್ಪ ಆಯ್ತು ಅಂತ ಕನ್ನಡ ಚಿತ್ರರಂಗವನ್ನೇ ತೊರೆದ ಕಲಾವಿದೆ;

 | 
Ueu

ದೂರದ ಬೆಟ್ಟ ನುಣ್ಣಗೆ ಎಂಬ ಮಾತಿನಂತೆ ಸಿನಿಮಾ ನಟ-ನಟಿಯರ ಜೀವನ ಸಂತೋಷದಿಂದ ಕೂಡಿರುತ್ತದೆ ಅನ್ನೋದು ನೋಡುವವರ ಅಭಿಪ್ರಾಯ. ಆದರೆ ಸೆಲೆಬ್ರಿಟಿಗಳಾದರೂ ಸಾಮಾನ್ಯ ಜನರಂತೆ ಜೀವನದಲ್ಲಿ ನೋವುಂಡ, ದುರಂತ ಅಂತ್ಯ ಕಂಡ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಅವರಲ್ಲಿ ಮಂಜು ಮಾಲಿನಿ ಕೂಡಾ ಒಬ್ಬರು.

ಮಂಜುಮಾಲಿನಿ ಹೆಸರು ಎಲ್ಲರಿಗೂ ಪರಿಚಯ ಇಲ್ಲದಿದ್ದರೂ ಎಲ್ಲಾ ಸಿನಿಪ್ರಿಯರಿಗೆ ಅವರ ಮುಖ ಪರಿಚಯ ಇದೆ. ನೋಡಲು ಬಹಳ ದಪ್ಪವಿದ್ದ ಮಂಜುಮಾಲಿನಿ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳ ಮೂಲಕವೇ ನಮ್ಮೆಲ್ಲರನ್ನು ರಂಜಿಸಿದ ಪ್ರತಿಭಾನ್ವಿತ ನಟಿ. ಕನ್ನಡದಲ್ಲಿ ಮಂಜುಮಾಲಿನಿ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯನಟಿಯಾಗಿ ನಟಿಸಿದ್ದಾರೆ. ಗುಂಡನೆ ದೇಹ, ನಕ್ಕು ನಗಿಸುವಂತ ಡೈಲಾಗ್‌ಗಳ ಮೂಲಕವೇ ಮಂಜುಮಾಲಿನಿ ಹಾಸ್ಯಪ್ರಿಯರನ್ನು ಸೆಳೆದಂತ ಕಲಾವಿದೆ. ತೆರೆ ಮೇಲೆ ಎಲ್ಲರನ್ನೂ ನಕ್ಕು ನಲಿಸಿದ ಮಂಜು ಮಾಲಿನಿ ತೆರೆ ಹಿಂದೆ ಅನುಭವಿಸಿದ ಕಷ್ಟಗಳು ಹೆಚ್ಚಿನ ಜನರಿಗೆ ತಿಳಿದಿಲ್ಲ.

ಮಂಜುಮಾಲಿನಿ ಮೂಲತ: ಚಿತ್ರದುರ್ಗಕ್ಕೆ ಸೇರಿದವರು. ಬಾಲ್ಯದಿಂದಲೇ ಮಂಜುಮಾಲಿನಿ ದಪ್ಪ ಇದ್ದರು. ಹೆತ್ತವರಿಗೆ ಇವರ ತೂಕವೇ ದೊಡ್ಡ ಚಿಂತೆ ಆಗಿತ್ತು. ಹೊರಗಿನವರು, ಸಂಬಂಧಿಕರು ಕೂಡಾ ಮಂಜುಮಾಲಿನಿ ಅವರನ್ನು ಅಪಹಾಸ್ಯ ಮಾಡುತ್ತಿದ್ದರು. ಇದು ಅವರ ಮನಸ್ಸಿಗೆ ಬಹಳ ನೋವುಂಟು ಮಾಡಿತ್ತು. ಅದೇ ಸಮಯದಲ್ಲಿ ಅವರಿಗೆ ಸಿನಿಮಾರಂಗ ಕೈ ಬೀಸಿ ಕರೆಯಿತು. ಡಾ. ವಿಷ್ಣುವರ್ಧನ್‌ ಹಾಗೂ ರೆಬೆಲ್‌ ಸ್ಟಾರ್‌ ಅಂಬರೀಶ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ನಾಗರಹಾವು ಸಿನಿಮಾ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಯುತ್ತಿದ್ದ ವೇಳೆ ಮಂಜುಮಾಲಿನಿ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಕಣ್ಣಿಗೆ ಬಿದ್ದಿದ್ದಾರೆ. 

ತಮ್ಮ ಸಿನಿಮಾಗೆ ಹಾಸ್ಯ ಕಲಾವಿದರನ್ನು ಹುಡುಕುತ್ತಿದ್ದ ಪುಟ್ಟಣ್ಣ ಕಣಗಾಲ್‌ ಸಿನಿಮಾದಲ್ಲಿ ನಟಿಸಲು ಮಂಜು ಮಾಲಿನಿಗೆ ಆಫರ್‌ ನೀಡಿದ್ದಾರೆ. ಇದಕ್ಕೆ ಆಕೆ ಕೂಡಾ ಒಪ್ಪಿದ್ದಾರೆ. ನಾಗರಹಾವು ಚಿತ್ರದ ಮೂಲಕ ಸಿನಿರಂಗಕ್ಕೆ ಬಂದ ಮಂಜು ಮಾಲಿನಿ ಮುಂದೆ ಬೊಂಬಾಟ್‌ ಹುಡ್ಗಿ, ಲೇಡಿಸ್‌ ಹಾಸ್ಟೆಲ್‌, ಸಾಂಗ್ಲಿಯಾನ, ಆಹಾ ನನ್ನ ಮದುವೆಯಂತೆ, ರಾಮಾಚಾರಿ, ಎದುರ್ಮನೇಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ, ಬಾನಲ್ಲೆ ಮಧು ಚಂದ್ರಕೆ, ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಅವರು ಅಭಿನಯಿಸಿದ ಸಿನಿಮಾಗಳಲ್ಲಿ ಹೆಚ್ಚಿನವು ಕಾಶಿನಾಥ್‌ ಹಾಗೂ ಸಾಯಿ ಪ್ರಕಾಶ್‌ ನಿರ್ದೇಶನದ ಚಿತ್ರಗಳು ಎಂಬುದು ಗಮನಾರ್ಹ. ತಾಳಿ ಕಟ್ಟುವ ಶುಭ ವೇಳೆ, ಮಂಜುಮಾಲಿನಿ ನಟಿಸಿದ ಕೊನೆಯ ಸಿನಿಮಾ.

ಸಿನಿಮಾದಲ್ಲಿ ಹಾಸ್ಯನಟಿಯಾಗಿ ಗುರುತಿಸಿಕೊಂಡರೂ ಮಂಜುಮಾಲಿನಿಗೆ ಹೇಳಿಕೊಳ್ಳುವಷ್ಟು ಸಂಭಾವನೆ ಸಿನಿಮಾದಿಂದ ಬರುತ್ತಿರಲಿಲ್ಲ. ಮದುವೆ ಆದ ನಂತರವೂ ಆರ್ಥಿಕ ಸಮಸ್ಯೆ ತಪ್ಪಲಿಲ್ಲ. ಇದರ ಜೊತೆಗೆ ಆಕೆ ಡಯಾಬಿಟಿಸ್‌ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಸಿನಿಮಾಗಳಿಂದ ದೊರೆಯತ್ತಿದ್ದ ಅಲ್ಪಸ್ವಲ್ಪ ದುಡ್ಡನ್ನು ಮನೆ ಬಾಡಿಗೆಗೆ ಕೊಡುವುದೋ, ಹೊಟ್ಟೆ ತುಂಬಿಸಿಕೊಳ್ಳುವುದೋ ಅಥವಾ ಆಸ್ಪತ್ರೆಗೆ ಕಟ್ಟುವುದೋ ಎಂಬ ಗೊಂದಲದಲ್ಲೇ ಬದುಕು ಮುಂದೂಡುತ್ತಿದ್ದರು ಮಂಜು ಮಾಲಿನಿ.

ಕೊನೆಯ ದಿನಗಳಲ್ಲಿ ಮಂಜುಮಾಲಿಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆ ಆಯ್ತು. ಆರ್ಥಿಕ ಸಮಸ್ಯೆಯಿಂದ ಅವರ ಆರೋಗ್ಯ ಸಮಸ್ಯೆ ಕೂಡಾ ಹೆಚ್ಚಾಯ್ತು. ಆರೋಗ್ಯ ಸಮಸ್ಯೆ ಮಿತಿ ಮೀರಿದ್ದರಿಂದ 2006 ನವೆಂಬರ್‌ನಲ್ಲಿ ಮಂಜುಮಾಲಿನಿ ಇಹಲೋಕ ತ್ಯಜಿಸಿದರು. ಅವರಿಗೆ ಒಬ್ಬರು ಮಗಳಿದ್ದಾರೆ. ಮಂಜುಮಾಲಿನಿ ಕಣ್ಮರೆಯಾಗಿದ್ದರೂ ಅವರ ಹಾಸ್ಯ ಇಂದಿಗೂ ನಮ್ಮನ್ನು ನಗಿಸುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.