ಮುಸ್ಲಿಮರೆಂದರೆ ಪುನೀತ್ ರಾಜ್ ಕುಮಾರ್ ಗೆ ಸಾಕಷ್ಟು ಪ್ರೀತಿ; ಹಲಾಲ್ ಬಿರಿಯಾನಿ ಎಂದರೆ ಪಂಚಪ್ರಾಣ

 | 
Ju

ಎಲ್ಲೆಡೆ ರಂಜಾನ್ ಹಬ್ಬದ ಆಚರಣೆ ಜೋರಾಗಿದೆ. ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ತಿಂಗಳಿಂದ ಉಪವಾಸ ವ್ರತ ಆಚರಿಸಿದವರು ಇಂದು ಉಪವಾಸ ತ್ಯಜಿಸುತ್ತಿದ್ದಾರೆ. ಹಬ್ಬದ ಹಿನ್ನೆಲೆ ಬಡವರಿಗೆ ದವಸ ಧಾನ್ಯ, ಬಟ್ಟೆಗಳನ್ನು ದಾನ ಮಾಡಲಾಗುತ್ತದೆ. ಇದನ್ನು ದಾನ ಮಾಡುವ ಹಬ್ಬ ಎಂದು ಕರೆಯುತ್ತಾರೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬರೀ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಸಹಾಯಗುಣದಿಂದಲೂ ಎಲ್ಲರಿಗೂ ಹತ್ತಿರವಾಗಿದ್ದರು. ಅಪ್ಪುಗೆ ಜಾತಿ, ಧರ್ಮ ಮೀರಿ ಅಭಿಮಾನಿಗಳು, ಸ್ನೇಹಿತರು ಇದ್ದರು. ಎಲ್ಲರನ್ನು ಪುನೀತ್ ಒಂದೇ ರೀತಿ ಕಾಣುತ್ತಿದ್ದರು. ಚಿಕ್ಕಂದಿನಿಂದಲೂ ಅಪ್ಪುಗೆ ಮುಸ್ಲಿಂ ಶೈಲಿಯ ಬಿರಿಯಾನಿ ಅಂದರೆ ಅಚ್ಚು ಮೆಚ್ಚು. ಎರಡು ವರ್ಷದ ಹಿಂದೆ ಉರುಸ್ ಮೆರವಣಿಗೆಯಲ್ಲಿ ಕೂಡ  ಅಪ್ಪು ಫೋಟೊಗಳು ರಾರಾಜಿಸಿದ್ದವು.

ಬಲಗೈಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗಬಾರದು ಎನ್ನುವುದನ್ನು ಪುನೀತ್ ರಾಜ್‌ಕುಮಾರ್ ಪಾಲಿಸಿಕೊಂಡು ಬಂದಿದ್ದರು. ಅಪ್ಪು ಮಾಡುತ್ತಿದ್ದ ಎಷ್ಟೋ ಸಮಾಜಿಕ ಕೆಲಸಗಳು, ಸಹಾಯ ಕುಟುಂಬಸ್ಥರಿಗೂ ಗೊತ್ತಿರಲಿಲ್ಲ. ಮೈಸೂರಿನ ಶಕ್ತಿಧಾಮವನ್ನು ನಡೆಸಿಕೊಂಡು ಹೋಗುತ್ತಿದ್ದದ್ದು ಮಾತ್ರವಲ್ಲ, ಅದನ್ನು ಬಿಟ್ಟು ಸಾಕಷ್ಟು ವೃದ್ದಾಶ್ರಮ, ಅನಾಥಶ್ರಮ, ಶಾಲೆಗಳಿಗೆ, ಗೋಶಾಲೆಗಳಿಗೆ  ಅಪ್ಪು ಸಹಾಯ ಮಾಡುತ್ತಿದ್ದರು.

ತಮ್ಮ ಸಹಾಯಗುಣದಿಂದ ನಿಜಜೀವನದಲ್ಲಿ ಕೂಡ ಪುನೀತ್ ರಾಜ್‌ಕುಮಾರ್ ಹೀರೊ ಎನಿಸಿಕೊಂಡಿದ್ದರು. ಆದರೆ ತಾವು ಮಾಡದ ಸಹಾಯದ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಅಪ್ಪು ಸುಮಾರು 20ಕ್ಕೂ ಅಧಿಕ ಅನಾಥಾಶ್ರಮ, 10ಕ್ಕೂ ಹೆಚ್ಚು ಗೋಶಾಲೆ ಹಾಗೂ ವೃದ್ಧಾಶ್ರಮಗಳನ್ನು ಪೋಷಣೆ ಮಾಡುತ್ತಿದ್ದರು. ಅಪ್ಪು ಅಗಲಿಕೆಯ ಬಳಿಕವೇ ಬಹಳಷ್ಟು ಜನರಿಗೆ ಈ ವಿಚಾರ ಗೊತ್ತಾಗಿತ್ತು. ಸದ್ಯ ರಂಜಾನ್ ಹಬ್ಬದ ಆಚರಣೆ ನಡೆಯುತ್ತಿದೆ. ಈದ್-ಉಲ್-ಫಿತರ್ ಸಂಭ್ರಮದಲ್ಲಿ ಅಪ್ಪು ಬಡ ಮುಸ್ಲಿಂರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದರು.

 ಈ ಬಗ್ಗೆ ಮುಸ್ಲಿಂ ಬಾಂಧವರೊಬ್ಬರ ಜೊತೆ ಪುನೀತ್ ರಾಜ್‌ಕುಮಾರ್ ಮಾತನಾಡಿರುವ ಆಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಬ್ಬದ ಸಂಭ್ರಮದಲ್ಲಿ ಈ ಆಡಿಯೋ ಹಂಚಿಕೊಂಡು ನೆಚ್ಚಿನ ನಟನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಪ್ಪು ಸಹಾಯಗುಣದ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನು ಪ್ರತಿವರ್ಷ ರಂಜಾನ್ ಹಬ್ಬಕ್ಕೆ ಅಪ್ಪು ಶುಭಾಶಯ ಕೋರುತ್ತಾ ಬರುತ್ತಿದ್ದರು.