ನನ್ ಮೊಮ್ಮಕ್ಕಳ ಬಗ್ಗೆ ಮಾತಾಡಿದ್ರೆ ಮಕ್ಕುಗಿತ್ತೀನಿ, ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಕಿಡಿ
| Aug 12, 2025, 14:30 IST
'ಕೊತ್ತಲವಾಡಿ' ಸಿನಿಮಾ ನಿರ್ಮಿಸಿ ಯಶ್ ತಾಯಿ ಪುಷ್ಪಾ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಪೃಥ್ವಿ ಅಂಬರ್ ನಟನೆಯ ಈ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಒಳ್ಳೆ ಸಿನಿಮಾಗಳನ್ನು ಮಾಡುವುದಾಗಿ ಪುಷ್ಪಾ ಭರವಸೆ ನೀಡಿದ್ದಾರೆ. ಇನ್ನು ಒಳ್ಳೆ ಸಿನಿಮಾಗಳನ್ನು ಕೆಲವರು ಸೋಲಿಸುವ ಪ್ರಯತ್ನ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಎಚ್ಚರವಹಿಸುವುದಾಗಿ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾ ಟ್ರೋಲ್, ಫ್ಯಾನ್ಸ್ ವಾರ್ ಬಗ್ಗೆ ಮಾತನಾಡುತ್ತಾ ಸುದೀಪ್ ಹಾಗೂ ಯಶ್ ಮಕ್ಕಳ ಬಗ್ಗೆಯೂ ಕೆಲವರು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದರು, ಅದು ನನ್ನ ಗಮನಕ್ಕೂ ಬಂದಿತ್ತು ಎಂದು ನಟಿ ರಮ್ಯಾ ಇತ್ತೀಚೆಗೆ ಮಾಧ್ಯಮಗಳ ಮುಂದೆ ಹೇಳಿದ್ದರು. ತಮಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿ ರಮ್ಯಾ ಮಾತನಾಡಿದ್ದರು. "ಎರಡು ವರ್ಷಗಳ ಹಿಂದೆ ನಾನು ಪೋಸ್ಟ್ ಮಾಡಿದ್ದೆ. ಯಶ್, ಸುದೀಪ್ ಫ್ಯಾನ್ಸ್ ವಾರ್ ವೇಳೆ ಅವರ ಹೆಂಡ್ತಿ ಮಕ್ಕಳ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ರು. ನನಗೆ ಆಗ ಬೇಸರವಾಗಿತ್ತು" ಎಂದಿದ್ದರು.
ನಟಿ ರಮ್ಯಾ ಹೇಳಿಕೆಯ ಬಗ್ಗೆ Talking Parrots ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಯಶ್ ತಾಯಿ ಪುಷ್ಪಾ ಪ್ರತಿಕ್ರಿಯಿಸಿದ್ದಾರೆ. ಟ್ರೋಲ್ಸ್ ವಿರುದ್ಧ ರಮ್ಯಾ ನಿಂತಿರುವ ಬಗ್ಗೆ ಮಾತನಾಡಿ "ಒಬ್ಬ ಲೇಡಿಯಾಗಿ ರಮ್ಯಾ ಎದುರು ನಿಂತಿದ್ದಾರೆ. ಬೇರೆ ಯಾರೂ ಮಾತನಾಡಿಲ್ಲ. ಯಾಕ್ರಪ್ಪಾ ಹೀಗೆಲ್ಲಾ ಮಾಡ್ತೀರಾ? ಎಲ್ಲರೂ ಕೆಟ್ಟದಾಗಿ ಕಾಮೆಂಟ್ ಮಾಡಲ್ಲ, ಕೆಲವ್ರು ಮಾತ್ರ ಮಾಡ್ತೀರಾ? ಯಾಕೆ ಬೇಕು. ವಿದ್ಯಾವಂತರಾಗಿದ್ದೀರಾ, ಇದೆಲ್ಲ ತಪ್ಪಲ್ಲವೇ? ಯಾಕೆ ಕರ್ನಾಟಕದ ಹೆಸರು ಹಾಳು ಮಾಡ್ತೀರಾ? ಎಂದು ಪುಷ್ಪಾ ಪ್ರಶ್ನಿಸಿದ್ದಾರೆ.
ರಮ್ಯಾ ಬಂದು ಇಷ್ಟೆಲ್ಲಾ ಮಾತನಾಡ್ಬೇಕಾ? ನಮ್ ಯಶ್ ಮಕ್ಕಳ ಬಗ್ಗೆ ಮಾತನಾಡಿದ್ದಾರೆ? ಯಶ್ ಏನು ಆಗಬೇಕಿಲ್ಲ, ಅವ್ರ ಮನೆಯವ್ರು ಏನು ಆಗಬೇಕಿಲ್ಲ, ಆದರೂ ಬಹಳ ಲೇಡಿಯಾಗಿ ಯಶ್ ಮನೆ ಬಗ್ಗೆ ಮಾತನಾಡಿದ್ರು. ನನಗೆ ಅಲ್ಲಿಯವರೆಗೂ ಗೊತ್ತಿರಲಿಲ್ಲ. ಗೊತ್ತಾಗಿದ್ರೆ, ಅವತ್ತೇ ಟಿವಿಯಲ್ಲಿ ಕೂತು ಮಾತಾಡ್ತಿದ್ದೆ. ನನ್ನ ಮೊಮ್ಮಕ್ಕಳ ಬಗ್ಗೆ ಮಾತಾಡಿದ್ರೆ ಮಕ್ಕುಗಿತ್ತೀನಿ. ನಾನು ಬದುಕಿರುವವರೆಗೂ ನಮ್ ಮೊಮ್ಮಕ್ಕಳ ಬಗ್ಗೆ ಯಾರು ಮಾತನಾಡಲು ಬಿಡಲ್ಲ, ಅಂತ ಕೆಲ್ಸ ಅವರಪ್ಪನೇ ಮಾಡೋಕೆ ಬಿಡಲ್ಲ. ರಮ್ಯಾ ಬಂದು ನಮ್ ಮನೆ ವಿಷ್ಯಾ ಮಾತಾಡ್ಬೇಕಾ? ನಾನು ರಮ್ಯಾ ವಿಷ್ಯಾ ಮಾತಾಡ್ಬೇಕಾ? ಯಾಕ್ರಪ್ಪ ಹೀಗೆಲ್ಲಾ ಮಾಡ್ತೀರಾ? ಇದರಿಂದ ಎಲ್ಲರಿಗೂ ಸಮಸ್ಯೆ. ಒಂದು ವೇಳೆ ತಪ್ಪಾಗಿದ್ದರೆ ಕ್ಷಮೆ ಕೇಳಿ ಎಲ್ಲ ಬಿಟ್ಟುಬಿಡಿ" ಎಂದು ಪುಷ್ಪಾ ಕಿವಿಮಾತು ಹೇಳಿದ್ದಾರೆ.