ರವಿಚಂದ್ರನ್ ಹಿಂದಿನ ಮುಖ ಬಿಚ್ಚಿಟ್ಟ ಮತ್ತೊಬ್ಬ ‌ನಟ, ಕ್ರೇಜಿಸ್ಟಾರ್ ಮತ್ತೊಂದು ಮುಖ

 | 
Hnj

ಸ್ಯಾಂಡಲ್‌ವುಡ್‌ ಕ್ರೇಜಿಸ್ಟಾರ್‌ ರವಿಚಂದ್ರನ್‌ ಒಂದು ಕಾಲದಲ್ಲಿ ಸರಣಿ ಹಿಟ್‌ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದವರು. ಆಲ್‌ಟೈಮ್‌ ಸೂಪರ್‌ ಡೂಪರ್‌ ಸಿನಿಮಾಗಳೂ ಅವರ ಬತ್ತಳಿಕೆಯಿಂದ ಬಂದಿದ್ದವು. ಇಂದಿಗೂ ಕಿರುತೆರೆಯಲ್ಲಿ ಆ ಸಿನಿಮಾಗಳು ಪ್ರಸಾರ ಕಂಡರೆ, ಅವುಗಳನ್ನು ನೋಡುವ ಒಂದು ವರ್ಗವೂ ಇದೆ. ಹೀಗಿರುವಾಗ ಇದೇ ರವಿಚಂದ್ರನ್‌ ಅವರ ಆರಂಭದ ಸಿನಿಮಾ ಜರ್ನಿಗೆ ಅವರ ಧ್ವನಿಯಾಗಿದ್ದು ನಟ, ಕಂಠದಾನ ಕಲಾವಿದ ಶ್ರೀನಿವಾಸ್‌ ಪ್ರಭು.

ಇಂದಿಗೂ ಬಹುತೇಕರಿಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ, ರವಿಚಂದ್ರನ್‌ ಅವರ ಅಂದಿನ 20 ಪ್ಲಸ್‌ ಕ್ಲಾಸಿಕ್‌ ಹಿಟ್‌ ಸಿನಿಮಾಗಳಿಗೆ ರವಿಚಂದ್ರನ್‌ ಪಾತ್ರಕ್ಕೆ ಧ್ವನಿಯಾಗಿದ್ದು ಇದೇ ಶ್ರೀನಿವಾಸ್‌ ಪ್ರಭು. ಸಾವಿರ ಸುಳ್ಳು ಸಿನಿಮಾದಿಂದ ಆರಂಭವಾದ ಶ್ರೀನಿವಾಸ್‌ ಪ್ರಭು ಅವರ ಕಂಠದಾನದ ಜರ್ನಿ, ಅಭಿಮನ್ಯು ಚಿತ್ರದವರೆಗೂ ಸಾಗಿತು. ಆದರೆ, ಹಾಗೇ ಕಂಠದಾನ ಮಾಡಿದ್ದಕ್ಕೆ, ಆ ಕೆಲಸಕ್ಕೆ ತಕ್ಕ ಗೌರವ ಮತ್ತು ಸಂಭಾವನೆ ಮಾತ್ರ ರವಿಚಂದ್ರನ್‌ ಅವರ ಕಡೆಯಿಂದ ಸಿಕ್ಕಿರಲಿಲ್ಲ ಎಂದಿದ್ದಾರೆ ಶ್ರೀನಿವಾಸ್‌ ಪ್ರಭು.

ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶ್ರೀನಿವಾಸ್‌ ಪ್ರಭು, ಅಂದಿನ ಆ ಒಂದು ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಅದಾಗಲೇ ರವಿಚಂದ್ರನ್‌ ಅವರ ಕೆಲವು ಸಿನಿಮಾಗಳು ಬಿಡುಗಡೆ ಆಗಿದ್ದವು. ಆದರೆ, ಆ ಸಿನಿಮಾಗಳಲ್ಲಿನ ಕಂಠದಾನ ರವಿಚಂದ್ರನ್‌ಗೆ ಇಷ್ಟವಾಗಿರಲಿಲ್ಲ. ಹೀಗಿರುವಾಗಲೇ ಶ್ರೀನಿವಾಸ್‌ ಪ್ರಭು ಅವರೂ ಒಂದು ದಿನ ಧ್ವನಿ ರೆಕಾರ್ಡ್‌ ಮಾಡಿಕೊಡುತ್ತಾರೆ. ಖುದ್ದು ವೀರಾಸ್ವಾಮಿ ಅವರಿಗೂ ಅದು ಇಷ್ಟವಾಗುತ್ತದೆ. ಒಂದೂವರೆ ಗಂಟೆಯಲ್ಲಿಯೇ ಎಲ್ಲವೂ ಫೈನಲ್‌ ಆಗುತ್ತದೆ.

ಅಂದಿನಿಂದ ರವಿಚಂದ್ರನ್‌ ಸಿನಿಮಾಗಳಿಗೆ ಧ್ವನಿ ನೀಡುವ ಕೆಲಸ ಶುರುಮಾಡಿದ ಶ್ರೀನಿವಾಸ್‌ ಪ್ರಭು, ರವಿಚಂದ್ರನ್‌ ಅವರ 20 ಸಿನಿಮಾಗಳಿಗೆ ಧ್ವನಿ ನೀಡಿದ್ದಾರೆ. ಸಾವಿರ ಸುಳ್ಳು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಪ್ರೇಮಲೋಕ, ರಣಧೀರ, ಅಂಜದ ಗಂಡು, ಯುದ್ಧಕಾಂಡ, ಯುಗಪುರುಷ, ಬಣ್ಣದ ಗೆಜ್ಜೆ, ಕಿಂದರಿಜೋಗಿ, ಅಭಿಮನ್ಯು ಹೀಗೆ ಇನ್ನೂ ಹಲವು ಸಿನಿಮಾಗಳಿಗೆ ಪ್ರಭು ಅವರೇ ಧ್ವನಿ ನೀಡಿದ್ದರು.

ಆಗಿನ ಸಮಯದಲ್ಲಿ ಕಂಠದಾನ ಕಲಾವಿದರಿಗೆ ಹೆಚ್ಚು ಮನ್ನಣೆ ಸಿಗುತ್ತಿರಲಿಲ್ಲ. ಪ್ರೇಮಲೋಕ ಹಿಟ್‌ ಆಯ್ತು. ದೊಡ್ಡ ಕಾರ್ಯಕ್ರಮ ಮಾಡಿದರು. ಚಿತ್ರದ ಭಾಗವಾಗಿದ್ದ ಎಲ್ಲರಿಗೂ ಸ್ಮರಣಿಕೆ ಕೊಡುತ್ತಿದ್ದರು. ವಿಪರ್ಯಾಸ ಎಂದರೆ ಕಂಠದಾನ ಕಲಾವಿದರಿಗೆ ಯಾವುದೇ ಸ್ಮರಣಿಕೆ ಸಿಕ್ಕಿರಲಿಲ್ಲ. ಆ ಕ್ಷಣಕ್ಕೆ ಅದು ಅತೀ ಮುಖ್ಯ ಎಂದು ಶ್ರೀನಿವಾಸ್‌ ಪ್ರಭು ಸೇರಿ ಇನ್ನು ಕೆಲವರಿಗೂ ಎನಿಸಿರಲಿಲ್ಲ. ಚಿತ್ರ ಯಶಸ್ವಿಯಾಗಿದ್ದಕ್ಕೆ ಎಲ್ಲರ ಕೊಡುಗೆಯೂ ಅಷ್ಟೇ ಮುಖ್ಯ. ಎಲ್ಲರ ಪರವಾಗಿ ಶ್ರೀನಿವಾಸ್‌ ಪ್ರಭು ಅವರನ್ನೇ ಮುಂದೆ ಬಿಟ್ಟು, ಸ್ಮರಣಿಕೆ ನೀಡುವಂತೆ ಕೇಳಿದರು. ಅದರಲ್ಲಿ ಕಳೆದುಕೊಳ್ಳುವುದೇನಿದೆ ಎಂದು ರವಿಚಂದ್ರನ್‌ ಅವರನ್ನು ಕೇಳಿಯೇ ಬಿಟ್ಟರು ಶ್ರೀನಿವಾಸ್‌ ಪ್ರಭು.

ಕಂಠದಾನ ಕಲಾವಿದರಿಗೂ ಸ್ಮರಣಿಕೆ ಕೊಡಿ ಎಂದು ರವಿಚಂದ್ರನ್‌ ಅವರನ್ನು ಕೇಳುತ್ತಿದ್ದಂತೆ, ಆಗ ಇಲ್ಲ ಇಲ್ಲ ನೀನು ನನ್ನ ಧ್ವನಿ ಎಂದು ನಾನು ಹೇಗೆ ವೇದಿಕೆ ಮೇಲೆ ಹೇಳಿಕೊಳ್ಳಲಿ ಎಂಬ ಉತ್ತರ ರವಿಚಂದ್ರನ್‌ ಅವರಿಂದ ಬಂದಿತ್ತು. ಅದಕ್ಕೆ ನೀವು ಹೇಳಿಕೊಳ್ಳಬೇಡಿ. ಅದು ಗೌಪ್ಯವಾಗಿಯೇ ಇರಲಿ. ಸುಮ್ಮನೆ ಕಂಠದಾನ ಕಲಾವಿದ ಅಂತ ಹೇಳಿ ಒಂದು ಸ್ಮರಣಿಕೆ ಕೊಡಿ. ಅಥವಾ ತಂತ್ರಜ್ಞ ಎಂದಾದರು ಕೊಡಿ. ನನೆಗ ಕಂಠದಾನ ಮಾಡಿದ್ದಾರೆ ಎಂದು ನೀವು ಯಾರಿಗೂ ನನ್ನ ಪರಿಚಯ ಮಾಡಿಕೊಡಬೇಕಿಲ್ಲ ಎಂದು ಶ್ರೀನಿವಾಸ್‌ ಪ್ರಭು ಕೇಳಿಕೊಂಡರು. ಆಗ,ಬೇಕಿದ್ರೆ ಹಾಗೇ ಒಂದು ಸ್ಮರಣಿಕೆ ಕೊಡ್ತಿನಿ. ಮನೆಯಲ್ಲಿ ಇಟ್ಟುಕೊಳ್ಳಿ ಎಂದ್ದಿದ್ದರು ರವಿಚಂದ್ರನ್.

ಇದೊಂದೆ ಅಲ್ಲ ಆಗ ಕಂಠದಾನ ಕಲಾವಿದರಿಗೆ ಸಂಭಾವನೆ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿರಲಿಲ್ಲ. ತಾವು ಮಾಡುವ ಕೆಲಸಕ್ಕೆ ಅದು ತುಂಬ ಕಡಿಮೆ ಎಂದು ಶ್ರೀನಿವಾಸ್‌ ಪ್ರಭು ಅವರಿಗೂ ಅನಿಸುತ್ತಿತ್ತು. ಅದು ಜಗಳ ಅಲ್ಲ. ಹುಸಿ ಮುನಿಸುಗಳು, ಸಣ್ಣ ಸಣ್ಣ ಅಸಮಾಧಾನಗಳು. ರವಿಚಂದ್ರನ್‌ ಮತ್ತು ಶ್ರೀನಿವಾಸ್‌ ಪ್ರಭು ನಡುವೆ ಮನಸ್ತಾಪ ಆಗಿತ್ತು. ಆಮೇಲೆ ಸ್ವಲ್ಪ ಸಂಭಾವನೆ ಜಾಸ್ತಿ ಮಾಡಿದರು. ಈ ಕಾರಣಕ್ಕೂ ಅವರಿಗೆ ಬೇಸರ ಆಯ್ತು. ಇನ್ಮೇಲೆ ನನ್ನ ಪಾತ್ರಕ್ಕೆ ನಾನೇ ಧ್ವನಿ ಕೊಡ್ತಿನಿ ಎಂದು ರವಿಚಂದ್ರನ್‌ ನಿರ್ಧರಿಸಿದರು. ರಾಮಾಚಾರಿಯಿಂದ ಅವರೇ ಅವರ ಪಾತ್ರಕ್ಕೆ ಧ್ವನಿ ಕೊಡಲು ಶುರು ಮಾಡಿದರು ಎಂದು ಶ್ರೀನಿವಾಸ್‌ ಪ್ರಭು ಹಳೆಯದನ್ನು ಕಲಾಮಾಧ್ಯಮ ಯೂಟ್ಯೂಬ್‌ ಜತೆಗೆ ನೆನಪಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ)